ಪ್ರಸಾದ

ದೇವರ ನೈವೇದ್ಯವನ್ನು ಪ್ರಸಾದವೆನ್ನುವುದುಂಟು. ವೀರಶೈವರಲ್ಲಿ ಇದು ಅಷ್ಟಾವರಣಾಂತರ್ಗತವಾದ ಒಂದು ತತ್ತ್ವ. ಶರಣರು ಪ್ರಸಾದವನ್ನು ಮಾತ್ರ ಸೇವಿಸಬೇಕೆಂಬ ಕಟ್ಟಳೆ ಇದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ-ಎಂಬಿವು ಅಷ್ಟಾವರಣಗಳು; ಕ್ರಿಯಾ ಪ್ರಧಾನವಾದ ಮತಾಚಾರಗಳು, ಪ್ರಸಾದದಲ್ಲಿ ಸಿದ್ಧ ಶುದ್ಧ ಪ್ರಸಿದ್ಧ ಎಂಬಿವು ಗುರುಲಿಂಗಜಂಗಮರ ಅನುಗ್ರಹರೂಪವಾದ ಪ್ರಸಾದಗಳು. ಆಪ್ಯಾಯನ ಸಮಯ, ಪಂಚೇಂದ್ರಿಯ ವಿರಹಿತ ಅಂತಃಕರಣ ವಿರಹಿತ, ಪ್ರಸಾದೀಯ, ಸದ್ಭಾವ, ಸಮತಾ, ಸಮ್ಯಕ್‍ಜ್ಞಾನ ಎಂಬ ಪ್ರಸಾದ ಭೇದಗಳು ಲಿಂಗವಂತನಲ್ಲಿ ಉಂಟು. ಶರಣರು ಸುಜ್ಞಾನ ಅಂಗವೆಂದೂ ಪ್ರಸಾದ ಲಿಂಗವೆಂದೂ ಕೆಲವೆಡೆ ಹೇಳಿರುತ್ತಾರೆ. ಲಿಂಗಾರ್ಪಿತವಾದ ವಸ್ತು ಪ್ರಸಾದವೆನಿಸುತ್ತದೆ.

ಪ್ರಾಣಲಿಂಗ ಪ್ರಸಾದವನ್ನು ತಿಳಿದುನೋಡಿ ಅರ್ಪಿತವಿಲ್ಲದ ಮುನ್ನವೇ ಅನರ್ಪಿತ ಪ್ರಸಾದವಾಗಿಪ್ಪ ಆದಿಪ್ರಸಾದವನ್ನು ನಾದ ಬಿಂದು ಕಳೆಯೆಂಬ ಶಿವಶಕ್ತಿ ಕಳೆಯದ ಮುನ್ನವೆ ಲಿಂಗಕ್ಕೆ ಅರ್ಪಿತವು ಮಾಡಿ ಪ್ರಸನ್ನ ಪ್ರಸಾದದ ಸ್ವೀಕರಿಸುತ್ತಿದ್ದರೆಂಬುದೀಗ, ಪ್ರಾಣಿಲಿಂಗ ಪ್ರಸಾದವ ತಿಳಿದು ನೋಡಿ ಆದಿಯ ಪ್ರಸಾದದ ಭೇದಿಸಿಕೊಂಡರು ಗುಹೇಶ್ವರಾ ಎಂಬ ಪ್ರಭುದೇವರ ವಚನದಂತೆ ಪ್ರಸಾದವನ್ನು ಸ್ವೀಕರಿಸತಕ್ಕವನೇ ಸಂಪನ್ನ ಆದಿಪ್ರಸಾದಿ ಎನಿಸಿಕೊಳ್ಳುವನು.

ತನುಮನ ಮುಟ್ಟಿದೋಗರ ಲಿಂಗಾರ್ಪಿತವಲ್ಲ, ಅನರ್ಪಿತ. ಅಂತದನುಂಡು ಅಚ್ಚ ಪ್ರಸಾದಿಗಳೆಂಬರಯ್ಯಾ. ಲಿಂಗದಲ್ಲಿ ಸಂಯುಕ್ ಶರಣರು ಮೆಚ್ಚರು. ಬಂದ ಪ್ರಸಾದವನು ಕೂಡಲ ಚೆನ್ನಸಂಗಯ್ಯಂಗರ್ಪಿಸಿ ಕೊಳಬಲ್ಲಾತನೇ ಅಂತ್ಯ ಪ್ರಸಾದಿ ಎಂಬ ವಚನಾರ್ಥದಂತೆ ಪ್ರಸಾದ ಸ್ವೀಕಾರದಲ್ಲಿ ತನು ಮತ್ತು ಮನದ ಭಾವನೆಯನ್ನು ಬಿಟ್ಟು ಶಿವಭಾವನೆಯಿಂದ ಪ್ರಸಾದವನ್ನು ಆತ್ಮಾರ್ಪಿತ ಮಾಡಿಕೊಳ್ಳುವವನೇ ಅಂತ್ಯ ಪ್ರಸಾದಿ.

	ಲಿಂಗವಂತ ಶರಣರು ಊಟಮಾಡುವ ಗಂಗಳ ತಟ್ಟೆ ಅಥವಾ ಪಾತ್ರೆಗೆ ಪ್ರಸಾದದ ಬಟ್ಟಲು ಎಂದು ಹೆಸರು. ವೀರಶೈವರಲ್ಲಿ ಗುರುಕರುಣವನ್ನು ಪಡೆದವರೂ ಶೀಲವಂತರೂ ಮಠಾಧಿಪತಿಗಳೂ ತಮ್ಮದೇ ಆದ ಊಟದ ತಟ್ಟೆಯನ್ನು ಪಡೆದಿರುತ್ತಾರೆ. ಈ ಪಾತ್ರೆಯನ್ನು ಊಟವಾದ ಮೇಲೆ ಚೆನ್ನಾಗಿ ನಾಲಗೆಯಿಂದ ನೆಕ್ಕಿ ಎಳ್ಳಷ್ಟು ಪ್ರಸಾದ ಉಳಿಯದಂತೆ ಸೇವಿಸುತ್ತಾರೆ. ಲಿಂಗ ನೈವೇದ್ಯವಾದ ಪ್ರಸಾದ ಸ್ವಲ್ಪವೂ ವ್ಯರ್ಥವಾಗಬಾರದು ಎಂಬುದು ಅವರ ಮುಖ್ಯ ತತ್ತ್ವ. ಸೊಲ್ಲಾಪುರದಲ್ಲಿರುವ ಶಿವಶರಣ ರುದ್ರಮ್ಮನವರ ಮಠದಲ್ಲಿ ಇಂದಿಗೂ ಈ ಪರಿಪಾಠವನ್ನು ಪ್ರತ್ಯಕ್ಷವಾಗಿ ಕಾಣಬಹುದು.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ